ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವಿತೆ

  ಮೌನದೊಳಗೊಂದು ಪ್ರಸವ ಎಂದಿನಂತಿಲ್ಲ  ಮನದೊಳಗಿನ ಈ ಮೌನ  ಯಾವುದೋ ಸದ್ದು, ಸದ್ದಿಲ್ಲದೇ ನುಸುಳಿ ಸುಳಿ ಸುಳಿದು ಸರಿಯುತ್ತಿದೆ ಏಕಾಂತದ ಕಾಂತಿಯಲ್ಲೇನೋ ಕೊರತೆ....  ಕಾರಣವಿಲ್ಲದೇ ಕುಣಿಯುವ  ಭಾವ ಬಿಂದುಗಳು  ಬಂಧಿಸಲಾಗದ ಭೀಕರ ಕಂಪನಗಳು ತನ್ನಷ್ಟಕ್ಕೆ ತಾನೇ ಉರಿದುರಿದು  ತಣಿಯುವ ತರಂಗಗಳ ಹಿಂದಿರುವ  ತತ್ತ್ವ ಯಾವುದು....?  ಕಂಪನದಿಂದಲೇ ಶುರುವಾದದ್ದು ಈ ಸದ್ದು....  ಅನುಕಂಪವಿರಲಿ ಅನುರಾಗವಿರಲಿ ಆತಂಕವಿರಲಿ ಅಭಿಮಾನವಿರಲಿ ಎಲ್ಲದರ ಮೂಲ  ಒಂದು ಕಂಪನ....  ಈ ಮೌನದೊಳಗೆ ಬಂದು  ಆಟವಾಡುವ ಅಲೆಗಳ  ಬೇಟೆಯಾಡಲು  ಹೂಡಿದ ಶರಗಳೆಲ್ಲವೂ  ಶಿಥಿಲವಾಗಿವೆ....  ಬೀಸಿದ ಬಲೆಯಲ್ಲಿ ಬೀಳದೆ ಉಸಿರಿನ ಬಿಸಿಯೇರಿಸಿ ಬಸಿರಾದ ಭಾವಗಳಿಗೇನು ಗೊತ್ತು  ಪ್ರಸವ ವೇದನೆ...  〽️ಮಹೇಶ್ ಹೆಗಡೆ ಹಳ್ಳಿಗದ್ದೆ 

ಗಜ಼ಲ್

 ಗಜ಼ಲ್  ನನ್ನ ಹೆಜ್ಜೆಯೊಂದಿಗೆ ನೀನೂ ಬರಬಹುದೆಂದು ಊಹಿಸಿರಲಿಲ್ಲ  ಒಬ್ಬಂಟಿ ಪಯಣದಲಿ ಜೊತೆ ಇರಬಹುದೆಂದು ಊಹಿಸಿರಲಿಲ್ಲ  ಹುಟ್ಟು ಸಾವುಗಳ ನಡುವಿನ ಅಂತರ ಸವೆಸಲು ನಡೆಯಬೇಕಲ್ಲ ಬಳಲಿದೆದೆಗೆ ಒಲವಿನ ಬಲ ಸೇರಬಹುದೆಂದು ಊಹಿಸಿರಲಿಲ್ಲ  ಯಾರಿದ್ದರೇನು ಇಲ್ಲದಿದ್ದರೇನು ನನ್ನ ಹೊಟ್ಟೆಯ ನಾನೇ ತುಂಬಿಸಬೇಕು ನಿನ್ನ ಪ್ರೀತಿ ಮಾತುಗಳು ಹಸಿವ ನೀಗಬಹುದೆಂದು ಊಹಿಸಿರಲಿಲ್ಲ  ಕಾಣದ ದಾರಿಯ ಕ್ರಮಿಸಿ ಗುರಿ ಸೇರಲು ಆಗದೇನು ನನಗೆ  ಬದುಕಿನ ತಿರುವುಗಳಲ್ಲಿ ಹೂವು ಸಿಗಬಹುದೆಂದು ಊಹಿಸಿರಲಿಲ್ಲ  ನೋವು ನಲಿವುಗಳೇನೇ ಬರಲಿ ನುಂಗಿ ಮುಂದೆ ಸಾಗುತಿರು ಶಿವ ನಾ ಕಂಡ ಕನಸುಗಳು ಇಂದು ನಗಬಹುದೆಂದು ಊಹಿಸಿರಲಿಲ್ಲ  〽️ಮಹೇಶ್ ಹೆಗಡೆ ಹಳ್ಳಿಗದ್ದೆ