ಕವಿತೆ

 

ಮೌನದೊಳಗೊಂದು ಪ್ರಸವ


ಎಂದಿನಂತಿಲ್ಲ 

ಮನದೊಳಗಿನ ಈ ಮೌನ 

ಯಾವುದೋ ಸದ್ದು, ಸದ್ದಿಲ್ಲದೇ ನುಸುಳಿ

ಸುಳಿ ಸುಳಿದು ಸರಿಯುತ್ತಿದೆ


ಏಕಾಂತದ ಕಾಂತಿಯಲ್ಲೇನೋ

ಕೊರತೆ.... 


ಕಾರಣವಿಲ್ಲದೇ ಕುಣಿಯುವ 

ಭಾವ ಬಿಂದುಗಳು 

ಬಂಧಿಸಲಾಗದ ಭೀಕರ ಕಂಪನಗಳು

ತನ್ನಷ್ಟಕ್ಕೆ ತಾನೇ ಉರಿದುರಿದು 

ತಣಿಯುವ ತರಂಗಗಳ ಹಿಂದಿರುವ 

ತತ್ತ್ವ ಯಾವುದು....? 


ಕಂಪನದಿಂದಲೇ ಶುರುವಾದದ್ದು

ಈ ಸದ್ದು.... 

ಅನುಕಂಪವಿರಲಿ ಅನುರಾಗವಿರಲಿ

ಆತಂಕವಿರಲಿ ಅಭಿಮಾನವಿರಲಿ

ಎಲ್ಲದರ ಮೂಲ 

ಒಂದು ಕಂಪನ.... 


ಈ ಮೌನದೊಳಗೆ ಬಂದು 

ಆಟವಾಡುವ ಅಲೆಗಳ 

ಬೇಟೆಯಾಡಲು 

ಹೂಡಿದ ಶರಗಳೆಲ್ಲವೂ 

ಶಿಥಿಲವಾಗಿವೆ.... 


ಬೀಸಿದ ಬಲೆಯಲ್ಲಿ ಬೀಳದೆ

ಉಸಿರಿನ ಬಿಸಿಯೇರಿಸಿ

ಬಸಿರಾದ ಭಾವಗಳಿಗೇನು ಗೊತ್ತು 

ಪ್ರಸವ ವೇದನೆ... 


〽️ಮಹೇಶ್ ಹೆಗಡೆ ಹಳ್ಳಿಗದ್ದೆ 

ಕಾಮೆಂಟ್‌ಗಳು