ಪೋಸ್ಟ್‌ಗಳು

ಕವಿತೆ

  ಮೌನದೊಳಗೊಂದು ಪ್ರಸವ ಎಂದಿನಂತಿಲ್ಲ  ಮನದೊಳಗಿನ ಈ ಮೌನ  ಯಾವುದೋ ಸದ್ದು, ಸದ್ದಿಲ್ಲದೇ ನುಸುಳಿ ಸುಳಿ ಸುಳಿದು ಸರಿಯುತ್ತಿದೆ ಏಕಾಂತದ ಕಾಂತಿಯಲ್ಲೇನೋ ಕೊರತೆ....  ಕಾರಣವಿಲ್ಲದೇ ಕುಣಿಯುವ  ಭಾವ ಬಿಂದುಗಳು  ಬಂಧಿಸಲಾಗದ ಭೀಕರ ಕಂಪನಗಳು ತನ್ನಷ್ಟಕ್ಕೆ ತಾನೇ ಉರಿದುರಿದು  ತಣಿಯುವ ತರಂಗಗಳ ಹಿಂದಿರುವ  ತತ್ತ್ವ ಯಾವುದು....?  ಕಂಪನದಿಂದಲೇ ಶುರುವಾದದ್ದು ಈ ಸದ್ದು....  ಅನುಕಂಪವಿರಲಿ ಅನುರಾಗವಿರಲಿ ಆತಂಕವಿರಲಿ ಅಭಿಮಾನವಿರಲಿ ಎಲ್ಲದರ ಮೂಲ  ಒಂದು ಕಂಪನ....  ಈ ಮೌನದೊಳಗೆ ಬಂದು  ಆಟವಾಡುವ ಅಲೆಗಳ  ಬೇಟೆಯಾಡಲು  ಹೂಡಿದ ಶರಗಳೆಲ್ಲವೂ  ಶಿಥಿಲವಾಗಿವೆ....  ಬೀಸಿದ ಬಲೆಯಲ್ಲಿ ಬೀಳದೆ ಉಸಿರಿನ ಬಿಸಿಯೇರಿಸಿ ಬಸಿರಾದ ಭಾವಗಳಿಗೇನು ಗೊತ್ತು  ಪ್ರಸವ ವೇದನೆ...  〽️ಮಹೇಶ್ ಹೆಗಡೆ ಹಳ್ಳಿಗದ್ದೆ 

ಗಜ಼ಲ್

 ಗಜ಼ಲ್  ನನ್ನ ಹೆಜ್ಜೆಯೊಂದಿಗೆ ನೀನೂ ಬರಬಹುದೆಂದು ಊಹಿಸಿರಲಿಲ್ಲ  ಒಬ್ಬಂಟಿ ಪಯಣದಲಿ ಜೊತೆ ಇರಬಹುದೆಂದು ಊಹಿಸಿರಲಿಲ್ಲ  ಹುಟ್ಟು ಸಾವುಗಳ ನಡುವಿನ ಅಂತರ ಸವೆಸಲು ನಡೆಯಬೇಕಲ್ಲ ಬಳಲಿದೆದೆಗೆ ಒಲವಿನ ಬಲ ಸೇರಬಹುದೆಂದು ಊಹಿಸಿರಲಿಲ್ಲ  ಯಾರಿದ್ದರೇನು ಇಲ್ಲದಿದ್ದರೇನು ನನ್ನ ಹೊಟ್ಟೆಯ ನಾನೇ ತುಂಬಿಸಬೇಕು ನಿನ್ನ ಪ್ರೀತಿ ಮಾತುಗಳು ಹಸಿವ ನೀಗಬಹುದೆಂದು ಊಹಿಸಿರಲಿಲ್ಲ  ಕಾಣದ ದಾರಿಯ ಕ್ರಮಿಸಿ ಗುರಿ ಸೇರಲು ಆಗದೇನು ನನಗೆ  ಬದುಕಿನ ತಿರುವುಗಳಲ್ಲಿ ಹೂವು ಸಿಗಬಹುದೆಂದು ಊಹಿಸಿರಲಿಲ್ಲ  ನೋವು ನಲಿವುಗಳೇನೇ ಬರಲಿ ನುಂಗಿ ಮುಂದೆ ಸಾಗುತಿರು ಶಿವ ನಾ ಕಂಡ ಕನಸುಗಳು ಇಂದು ನಗಬಹುದೆಂದು ಊಹಿಸಿರಲಿಲ್ಲ  〽️ಮಹೇಶ್ ಹೆಗಡೆ ಹಳ್ಳಿಗದ್ದೆ 

ಡಾ. ಗೋವಿಂದ ಹೆಗಡೆ

ಇಮೇಜ್
       ವೃತ್ತಿಯಲ್ಲಿ ಅರಿವಳಿಕೆ ತಜ್ಞ, ಪ್ರವೃತ್ತಿಯಲ್ಲಿ ಕವಿ, ವಿಮರ್ಶಕ, ಚಿಂತಕ. ಗಜ಼ಲ್, ಕವಿತೆ, ಛಂದೋಬದ್ಧ ಕಾವ್ಯ, ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಡಾ. ಗೋವಿಂದ ಹೆಗಡೆ. ಸುಮಾರು ಮೂರು ವರೆ ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಡಾ. ಗೋವಿಂದ ಹೆಗಡೆ ಅವರಿಗೆ ನಾಡಿನ ಹಲವಾರು ಹಿರಿಯ ಸಾಹಿತಿಗಳ ಹಾಗೂ ಕವಿಗಳ ಒಡನಾಟವಿದೆ. ಇದು, ಆಕಸ್ಮಿಕವಾಗಿ ಭೇಟಿಯಾದಾಗ ನಾನು ಹಾಗೂ ನನ್ನ ಮಡದಿ ಮೈತ್ರಿ, ಇಬ್ಬರೂ ಸೇರಿ ಹೊರತಂದ ನಮ್ಮ ಚೊಚ್ಚಲ ಗಜ಼ಲ್ ಸಂಕಲನ ಮಹತಿ ಯನ್ನು ಡಾ. ಗೋವಿಂದ ಹೆಗಡೆ ಅವರಿಗೆ ನೀಡಿದ ಸಂದರ್ಭ. 

ಜಿ ಸುಬ್ರಾಯ ಭಟ್ ಬಕ್ಕಳ

ಇಮೇಜ್
       ಕನ್ನಡಕ್ಕೆ ಗಜ಼ಲ್ ತಂದವರು ಶಾಂತರಸರು. ಆದರೆ ಕನ್ನಡದಲ್ಲಿ ಮೊದಲ ಗಜ಼ಲ್ ಸಂಕಲನವನ್ನು ತಂದವರು ಜಿ. ಸುಬ್ರಾಯ ಭಟ್ ಬಕ್ಕಳ. ನಮ್ಮ ಊರಿನವರೇ ಆದ ಇವರು, ಮಹತಿ ಗಜ಼ಲ್ ಸಂಕಲನದ ಬಿಡುಗಡೆಗೆ ಸಾಕ್ಷಿಯಾದದ್ದು ನನ್ನ ಸೌಭಾಗ್ಯ. ಕವಿ, ಬರಹಗಾರ, ಪತ್ರಕರ್ತ, ಕೃಷಿಕ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಕನ್ನಡಕ್ಕೆ ಮೊದಲ ಗಜ಼ಲ್ ಸಂಕಲನ ಕೊಟ್ಟ ಜಿ. ಸುಬ್ರಾಯ ಭಟ್ ಅವರ ಕೈಯಲ್ಲಿ ನನ್ನ ಮೊದಲ ಗಜ಼ಲ್ ಸಂಕಲನವನ್ನು ಇಟ್ಟ ಸಂದರ್ಭ. 

ಮಹತಿ ಗಜ಼ಲ್ ಸಂಕಲನ ಬಿಡುಗಡೆ

ಇಮೇಜ್
 ಮಹತಿ ಗಜ಼ಲ್ ಸಂಕಲನ ಬಿಡುಗಡೆಯಾದ ಸುದ್ದಿ ಪ್ರಕಟಿಸಿದ ಮಾಧ್ಯಮ ಮಿತ್ರರು. ಎಲ್ಲ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು.

ಹನಿಗವನ

# ಬೆಳಕು  ಅಲ್ಲಲ್ಲಿ ಬಿದ್ದ  ನೆರಳಿನ  ನಗು ಅಳಿಯದಂತೆ ಉಳಿದಿದೆ  ನೀ ಹರಿಸಿದ ಕಿರಣದಿಂದ 🍂 ಮಹೇಶ್ ಹೆಗಡೆ ಹಳ್ಳಿಗದ್ದೆ 

ಕವಿತೆ

ಬದುಕಿನ ದಾರಿ  ಮರೆಯಬೇಕು ಮನವೆ ನೀನು  ಎದೆಯಲಿರುವ ನೋವನೆಲ್ಲ  ತೆರೆಯಬೇಕು ಬೆಳಕಿನೆಡೆಗೆ ಹೊಸತು ಹರಿದು ಬರಲಿ ಎಲ್ಲ  ಕಾಲಚಕ್ರ ಉರುಳುತಿರಲು ಕಾಯಬೇಕು ತಾಳ್ಮೆಯಿಂದ  ಸಮಯ ಬರಲು ಸನಿಹ ಸರಿದು ಹಾಯಬೇಕು ಧೈರ್ಯದಿಂದ  ಒಡೆದ ಒಲವಿನೆದೆಯ ಭಾವ  ಕೂಡಬೇಕು ಪ್ರೀತಿಯಿಂದ  ಸಿಡಿಲು ಬಡಿದ ಮೋಡ ಕರಗಿ ಸುರಿಸಬೇಕು ಮಳೆಯನೊಂದ ಉರಿಯಬೇಕು ಗುಡಿಯ ದೀಪ  ಬಿರುಗಾಳಿಗೂ ಆರದಂತೆ ನಡೆಯಬೇಕು ಬದುಕ ದಾರಿ  ವಿಧಿಯ ನಿಯಮ ಮೀರದಂತೆ 🍂 ಮಹೇಶ್ ಹೆಗಡೆ ಹಳ್ಳಿಗದ್ದೆ